CLICK HERE ವಿಕಲಚೇತನ App

ಶ್ರವಣ ಸಾಧನ....ವರವೋ ಅಥವಾ ಶಾಪವೋ....?

ಕಿವುಡುತನ ಎನ್ನುವುದು ವ್ಯಕ್ತಿಯ ಕೇಳುವಿಕೆಯ ಸಾಮರ್ಥ್ಯವನ್ನು ತಗ್ಗಿಸುವುದಷ್ಟೇ ಅಲ್ಲದೆ ಆತನ ಮಾತುಕತೆಗೆ ತೊಂದರೆ ಉಂಟು ಮಾಡುತ್ತದೆ, ಸಾಮಾಜಿಕವಾಗಿ ಆತನನ್ನು ಪರಿತ್ಯಕ್ತನನ್ನಾಗಿಸುತ್ತದೆ. ಒಂದು ವೇಳೆ ಜನ್ಮಜಾತ ಕಿವುಡುತನ ಇದ್ದರೆ ಅದು ಆ ಮಗುವಿನ ಮಾತು ಮತ್ತು ಭಾಷಾ ಬೆಳವಣಿಗೆಯ ಮೇಲೆ ಪರಿಣಾಮ ಉಂಟು ಮಾಡುತ್ತದೆ. ಶ್ರವಣಶಕ್ತಿ ಅಥವಾ ಕಿವಿಕೇಳುವ ಸಾಮರ್ಥ್ಯವು ಮನುಷ್ಯನ ಮಾತು ಮತ್ತು ಭಾಷಾ ಬೆಳವಣಿಗೆಯಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ವ್ಯಕ್ತಿಯ ಕಿವುಡುತನಕ್ಕೆ ಅನೇಕ ಅಂಶಗಳು ಕಾರಣವಾಗುತ್ತವೆ. ಈ ಕಾರಣಗಳನ್ನು ಬಹಳ ಬೇಗನೆ ಪತ್ತೆ ಮಾಡಿ ಪರಿಹಾರ ಕಂಡುಕೊಳ್ಳುವುದು ಬಹಳ ಆವಶ್ಯಕ. ಹೀಗೆ ಮಾಡುವ ಮೂಲಕ ಕಿವುಡುತನದ ತೀವ್ರತೆ ಮತ್ತು ಹಾನಿಯನ್ನು ತಗ್ಗಿಸಿಕೊಳ್ಳಬಹುದು. ಕಿವುಡುತನಕ್ಕೆ ಕಾರಣ ಆಗುವ ಕೆಲವು ಅಂಶಗಳನ್ನು ಔಷಧಿಗಳ ಮೂಲಕ ಮತ್ತು ಸರಿಪಡಿಸುವ ಶಸ್ತ್ರಚಿಕಿತ್ಸೆಗಳ ಮೂಲಕ ತಗ್ಗಿಸಿಕೊಳ್ಳಬಹುದು. ಕಿವುಡುತನದ ಪರಿಣಾಮಗಳನ್ನು ತಗ್ಗಿಸಿಕೊಳ್ಳಲು ಶಸ್ತ್ರಚಿಕಿತ್ಸೆ ಅಥವಾ ಔಷಧಿ ಚಿಕಿತ್ಸೆಯು ಒಂದು ಆಯ್ಕೆ ಆಗಿಲ್ಲದಿರುವಾಗ ಶ್ರವಣ ಸಾಧನವನ್ನು ಉಪಯೋಗಿಸುವುದು ಒಂದು ಅನಿವಾರ್ಯ ಪರಿಹಾರ ಆಗಿರಬಹುದು.
ಶ್ರವಣ ಸಾಧನ ಎಂದರೇನು?
ಶ್ರವಣ ಸಾಧನ ಅಥವಾ ಹಿಯರಿಂಗ್‌ ಎಯ್ಡ ಎಂಬುದು ಕಿವಿ ಕೇಳಿಸುವ ಮಟ್ಟವನ್ನು ಹೆಚ್ಚಿಸುವ ಒಂದು ಸಾಧನ ಆಗಿದ್ದು, ಇದು ಶಬ್ದದ ಸಂಕೇತಗಳನ್ನು ಹಿಗ್ಗಿಸಿ ಅದನ್ನು ಕಿವಿಯ ನಾಳದಲ್ಲಿ ಬಿಡುಗಡೆ ಮಾಡುತ್ತದೆ. ಸರಳ ಶಬ್ದಗಳಲ್ಲಿ ಹೇಳುವುದಾದರೆ ಶ್ರವಣ ಸಾಧನ ಅನ್ನುವುದು ಕಿವಿಗೆ ಅಳವಡಿಸುವ ಒಂದು ಕಿರು -ಸ್ಪೀಕರ್‌ ಇದ್ದ ಹಾಗೆ. ಆದರೆ ಆಧುನಿಕ ಶ್ರವಣ ಸಾಧನದ ಕಾರ್ಯಚಟುವಟಿಕೆಯು ಸ್ಪೀಕರ್‌ನ ಚಟುವಟಿಕೆಗಷ್ಟೇ ಸೀಮಿತವಾಗಿಲ್ಲ. ಸುಧಾರಿತ ತಂತ್ರಜಾnನದಿಂದಾಗಿ ಶ್ರವಣ ಸಾಧನಕ್ಕೂ ಸಹ ಸಹಜ ಕಿವಿಯಷ್ಟೇ ಪ್ರಾಮುಖ್ಯತೆಯನ್ನು ಕೊಡಲಾಗುತ್ತಿದೆ.






ಶ್ರವಣ ಸಾಧನಗಳ ಪ್ರಯೋಜನ
ಶಬ್ದವನ್ನು ವರ್ಧಿಸುವುದು ಮತ್ತು ಅದನ್ನು ಕಿವಿಯಲ್ಲಿ ಬಿಡುಗಡೆ ಮಾಡುವುದು ಶ್ರವಣ ಸಾಧನಗಳ ಕೆಲಸ. ಬೇರೆ ಬೇರೆ ವ್ಯಕ್ತಿಗಳು ಒಡ್ಡಿಕೊಳ್ಳುವ ಬೇರೆ ಬೇರೆ ವಾತಾವರಣಕ್ಕೆ ತಕ್ಕದಾದ ಆಯ್ಕೆಗಳನ್ನು ಈ ಶ್ರವಣ ಸಾಧನಗಳಲ್ಲಿ ಅತ್ಯಾಧುನಿಕ ತಂತ್ರಜಾnನದ ಮೂಲಕ ಸೆಟ್‌ ಮಾಡಲಾಗಿರುತ್ತದೆ. ವ್ಯಕ್ತಿಯ ಶ್ರವಣ ನಷ್ಟದ ಮಾಹಿತಿಗಳನ್ನು ಶ್ರವಣ ಸಾಧನದ ಪ್ರೋಗ್ರಾಮಿಂಗ್‌ ಸಾಫ್ಟ್ವೇರ್‌ಗೆ ಪೂರೈಸಿದಾಗ, ಈ ರೀತಿಯ ಸೆಟ್‌ ಮಾಡುವಿಕೆ ಸಾಧ್ಯವಾಗುತ್ತದೆ.
ಶ್ರವಣ ಸಾಧನಕ್ಕಾಗಿ ನಾನು
ಯಾರನ್ನು ಸಂಪರ್ಕಿಸಬೇಕು?
ಆಡಿಯೋಲಾಜಿಸ್ಟ್‌ಗಳು ಅಂದರೆ ನುರಿತ ಶ್ರವಣ ತಜ್ಞರು. ಅವರು ವ್ಯಕ್ತಿಯ ಶ್ರವಣ ಸಾಮರ್ಥ್ಯವನ್ನು ಪರೀಕ್ಷೆ ಮಾಡುತ್ತಾರೆ. ಸೌಂಡ್‌ ಟ್ರೀಟೆಡ್‌ ರೂಂ ಎಂದು ಕರೆಯಲಾಗುವ ವಿಶೇಷ ಕೊಠಡಿಯಲ್ಲಿ ಶ್ರವಣ ತಜ್ಞರು ಶ್ರವಣ ಪರೀಕ್ಷೆಯನ್ನು ನಡೆಸಬೇಕು. ಶ್ರವಣ ನಷ್ಟದ ಮಟ್ಟವನ್ನು ಗುರುತಿಸಿದ ನಂತರ, ವ್ಯಕ್ತಿಗೆ ಸೂಕ್ತವೆನಿಸುವ ನಿರ್ವಹಣಾ ಕ್ರಮಗಳ ಆಯ್ಕೆಯನ್ನು ನೀಡುತ್ತಾರೆ. ಒಂದುವೇಳೆ ರೋಗಿಗೆ, ಶ್ರವಣ ಸಾಧನದ ಆಯ್ಕೆಯನ್ನು ನೀಡಿದ್ದರೆ, ಶ್ರವಣ ಸಾಧನದೊಂದಿಗೆ ಶ್ರವಣ ತಜ್ಞರು ಟ್ರಯಲ್‌ ಅನ್ನು ನಡೆಸಬೇಕು. ಶ್ರವಣ ಸಾಧನವನ್ನು ಆಯ್ಕೆ ಮಾಡುವಾಗ ವ್ಯಕ್ತಿಯ ಶ್ರವಣ ನಷ್ಟದ ವಿವರಗಳನ್ನು ಶ್ರವಣ ತಜ್ಞರು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ ಮತ್ತು ವ್ಯಕ್ತಿಯ ಶ್ರವಣ ನಷ್ಟಕ್ಕೆ ಅನುಗುಣವಾದ ಸಾಫ್ಟ್ವೇರ್‌ ಅನ್ನು ಆರಿಸಿಕೊಳ್ಳಬೇಕಾಗುತ್ತದೆ ಮತ್ತು ಅದಕ್ಕೆ ಪೂರಕವಾದ ಪ್ರೋಗ್ರಾಮಿಂಗ್‌ ಮಾಡಬೇಕಾಗುತ್ತದೆ. ಪ್ರೋಗ್ರಾಮಿಂಗ್‌ ಮಾಡುವಾಗ ರೋಗಿಯ ಪ್ರತಿಕ್ರಿಯೆಯು ಬಹಳ ಮುಖ್ಯವಾಗುತ್ತದೆ, ಯಾಕೆಂದರೆ ಆ ಮೂಲಕ ಸೂಕ್ತ ಹೊಂದಾಣಿಕೆ ಮಾಡಿಕೊಂಡು ಕೇಳುವಿಕೆಯನ್ನು ಹಿತಕಾರಿಯನ್ನಾಗಿ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.

ವ್ಯಾಪಕವಾಗಿ ಬೆಳೆದಿರುವ ಜಾಗತಿಕ ಜಾಲತಾಣಗಳಿಂದಾಗಿ ಈಗ ಯಾವ ವಸ್ತುವನ್ನು ಎಲ್ಲಿಂದ ಬೇಕಾದರೂ ಖರೀದಿ ಮಾಡಬಹುದು. ಅನೇಕ ಜನರು ತಮಗೆ ಉತ್ತಮವಾಗಿ ಕಿವಿ ಕೇಳಿಸುವಂತಾಗಲು ಶ್ರವಣ ಸಾಧನಗಳನ್ನೂ ಸಹ ವಿದೇಶಗಳಿಂದ ತರಿಸಿಕೊಳ್ಳುತ್ತಿದ್ದಾರೆ. ಒಂದು ವೇಳೆ ನೀವು ತರಿಸಿಕೊಂಡ ಶ್ರವಣ ಸಾಧನವು ನಿಮಗೆ ಇರುವ ಶ್ರವಣ ನಷ್ಟದ ಮಟ್ಟಕ್ಕೆ ಸಮನಾಗಿ ಹೊಂದಾಣಿಕೆ ಆಗದಿದ್ದರೆ ಆಗ ಏನು ಮಾಡುವುದು? ಒಂದು ವೇಳೆ ನಿಮಗಿರುವ ಶ್ರವಣ ನಷ್ಟದ ಮಟ್ಟಕ್ಕೆ ಶ್ರವಣ ಸಾಧನ ಅನ್ನುವುದು ಸೂಕ್ತ ಚಿಕಿತ್ಸಾ ಆಯ್ಕೆ ಆಗಿಲ್ಲದಿದ್ದರೆ ಆಗ ಏನು ಮಾಡುವಿರಿ? ಒಂದು ವೇಳೆ ನೀವು ಖರೀದಿಸಿದ ಶ್ರವಣ ಸಾಧನವು ನುರಿತ ಶ್ರವಣ ತಜ್ಞರಿಂದ ವ್ಯವಸ್ಥೆಗೊಂಡಿರದಿದ್ದು/ಪ್ರೋಗ್ರಾ ಮಿಂಗ್‌ ಮಾಡಿರದಿದ್ದು, ಧರಿಸಿದ ನಂತರ ಅದು ಹೊಂದಾಣಿಕೆ ಆಗದೆ ನಿಮಗಿರುವ ಕಿವುಡುತನ ಇನ್ನಷ್ಟು ಬಿಗಡಾಯಿಸಿದರೆ ಆಗ ಏನು ಮಾಡುವುದು? ಸೂಕ್ತ ಬೆಲೆಯನ್ನು ಪಾವತಿಸಿ ಖರೀದಿಸಿದ ಶ್ರವಣ ಸಾಧನವೊಂದು ತನ್ನ ಉದ್ದೇಶವನ್ನು ಪೂರೈಸಲಾಗದೆ ಹಾಗೆಯೇ ಮೇಜಿನ ಮೇಲೆ ಅಥವಾ ಕಪಾಟಿನ ಒಳಗೆ ಬಿದ್ದಿರುವುದನ್ನು ನೀವು ಇಷ್ಟಪಡುವಿರಾ.......?

ಇದು ತಂತ್ರಜಾnನ ಯುಗ, ನಿಮ್ಮ ಬೆರಳ ತುದಿಯ ಒಂದು ಕ್ಲಿಕ್‌ ಮೂಲಕ ನಿಮಗೆ ಬೇಕಿರುವ ಯಾವ ವಸ್ತುವೂ ಸಹ ನಿಮ್ಮ ಬಾಗಿಲ ಬಳಿ ಬಂದು ಬೀಳುತ್ತದೆ. ಇತ್ತೀಚಿನ ವರ್ಷಗಳಲ್ಲಿ ಬೇರೆ ಬೇರೆ ವೆಬೆÕ„ಟ್‌ಗಳ ಮೂಲಕ ಶ್ರವಣ ಸಾಧನಗಳೂ ಸಹ ಆನ್‌ಲೈನ್‌ ಮೂಲಕ ಸಿಗುತ್ತಿವೆ. ಇದು ಶ್ರವಣ ತಜ್ಞರನ್ನು ಭೇಟಿ ಆಗಬೇಕಿರುವ ಆವಶ್ಯಕತೆಯನ್ನು ಸಾರುತ್ತಿದೆ ಎಂಬುದಾಗಿ ಅನೇಕ ಜನರ ಪ್ರಶಂಸೆಗೂ ಕಾರಣವಾಗಿದೆ. ಮಾರ್ಕೆಟ್‌ನಲ್ಲಿ ಖರೀದಿಸುವ ಇಂತಹ ಶಿಫಾರಸು ರಹಿತ ಶ್ರವಣ ಸಾಧನಗಳಿಗೆ ಓವರ್‌ ದ ಕೌಂಟರ್‌ ಶ್ರವಣ ಸಾಧನಗಳು ಎಂಬುದಾಗಿ ಕರೆಯುತ್ತಾರೆ.

ಶಿಫಾರಸು ರಹಿತ ಶ್ರವಣ ಸಾಧನಗಳು

ಇವು ಮೆಡಿಕಲ್‌ ಸ್ಟೋರ್‌ಗಳಲ್ಲಿ, ಇಂಟರ್ನೆಟ್‌ ಮೂಲಕ ಅಥವಾ ಇನ್ನಿತರ ಜನರಲ್‌ ಸ್ಟೋರ್‌ಗಳಲ್ಲಿ
ಬಿಕರಿಯಾಗುವ ಶ್ರವಣ ಸಾಧನಗಳು. ತಜ್ಞ ವೈದ್ಯರನ್ನು ಭೇಟಿಯಾಗಿ ಸೂಕ್ತ ಶ್ರವಣ ಸಾಧನವನ್ನು ಮಾಡಿಸಿಕೊಳ್ಳಲಾಗದ ವಯಸ್ಕ ವ್ಯಕ್ತಿಗಳು ಈ ಸಾಧನಗಳ ಮಾರಾಟದ ಹಿಂದಿನ ಉದ್ದೇಶಿತ ಗುರಿಗಳು. ತಾವು ಹಿರಿಯ ವಯಸ್ಕರಿಗೆ ಅವಶ್ಯವಿರುವ ಸೇವೆಯನ್ನೂ ಸಹ ಒದಗಿಸುತ್ತೇವೆ ಎಂಬುದಾಗಿ ಇಂತಹ ಶ್ರವಣ ಸಾಧನಗಳನ್ನು ಮಾರಾಟ ಮಾಡುವವರು ಹೇಳಿಕೊಳ್ಳುತ್ತಾರೆ. ಶ್ರವಣ ಸಾಧನವನ್ನು ಖರೀದಿಸುವ ಅನೇಕ ಜನರ ಉದ್ದೇಶವೇನೋ ಈಡೇರುತ್ತದೆ, ಆದರೆ ಹಾಗೆ ಕೊಂಡ ಸಾಧನಗಳಿಂದ ಶ್ರವಣ ನಷ್ಟ ಆಗಿರುವ ಹಲವು ಜನರಿಗೆ ಯಾವ ಸಹಾಯವೂ ಆಗುವುದಿಲ್ಲ ಅನ್ನುವುದು ವಾಸ್ತವ.
ಇಂತಹ ಶ್ರವಣ ಸಾಧನಗಳು ಎಲ್ಲರಿಗೂ ಸೂಕ್ತವೆನಿಸುವಂತೆ ತಯಾರಾದವುಗಳು ಎಂಬುದಾಗಿ ಹೇಳಿಕೊಂಡು ಮಾರ್ಕೆಟ್‌ನಲ್ಲಿ ಸುಲಭವಾಗಿ ದೊರೆಯುತ್ತವೆ. ಆದರೆ ಅವು ನಿಮಗೆ ಪ್ರಯೋಜನಕಾರಿ ಎಂಬುದಕ್ಕೆ ಏನು ಪುರಾವೆ ಇದೆ? ಅವರು ತಮ್ಮ ವಸ್ತುವನ್ನು ಮಾರಾಟ ಮಾಡುವುದಕ್ಕೆ ಜಾಹೀರಾತು ನೀಡಲು ಹೇಳಿದ ಅದಾಗಿರಬಹುದಲ್ಲವೆ? ಅವು ಯಾವ ಮಟ್ಟದಲ್ಲಿ ನಿಮಗೆ ಪ್ರಯೋಜನಕಾರಿ ಆಗಬಲ್ಲವು ಎಂದು ಪರೀಕ್ಷೆ ಮಾಡುವುದಕ್ಕೆ ನಿಮ್ಮಲ್ಲೇನಾದರೂ ಮಾಪನಾ ಕ್ರಮ ಇದೆಯೇ? ನಿಮ್ಮ ಕಿವುಡುತನ ಹೆಚ್ಚಾಗುತ್ತಾ ಸಾಗಿ, ನಿಮಗೆ ಶ್ರವಣ ಸಾಧನವನ್ನೂ ಬಳಸಲು ಸಾಧ್ಯ ಆಗದಿರುವ ಮಟ್ಟ ತಲುಪಿದರೆ ಆಗ ಏನು ಮಾಡುವಿರಿ? ನೀವು ಖರೀದಿಸಿದ ಶ್ರವಣ ಸಾಧನವು ಒಂದು ಭಿನ್ನವಾದ ಪರಿಸರಕ್ಕೆ, ಅಂದರೆ ಟ್ರಾಫಿಕ್‌ನ ಗಲಾಟೆಯಲ್ಲಿ, ಸಮಾರಂಭದ ಸದ್ದುಗದ್ದಲದಲ್ಲಿ ಅಥವಾ ಮನೆಯ ಕಿರಿಕಿರಿಯ ನಡುವೆ ಶಬ್ದಗಳನ್ನು ಕೇಳಿಸಿಕೊಳ್ಳಲು ಪ್ರಯೋಜನಕಾರಿ ಆಗದೆ ಹೋದರೆ ಏನು ಮಾಡೋದು?
ಹೀಗೆ ಶಿಫಾರಸು ರಹಿತವಾಗಿ ಅಥವಾ ಓವರ್‌ ದ ಕೌಂಟರ್‌ ಕೊಂಡ ಶ್ರವಣ ಸಾಧನಗಳು ಅನೇಕ ಜನರ ಆವಶ್ಯಕತೆಗಳನ್ನು ಪೂರೈಸಲು ಸೋತಿವೆ ಎಂಬುದು ವಾಸ್ತವ. ಯಾಕೆಂದರೆ ಇಂತಹ ಶ್ರವಣ ಸಾಧನಗಳು ಮೈಕ್ರೋಫೋನಿನ ಹಾಗೆ ಒಟ್ಟಾರೆ ಶಬ್ದವನ್ನು ಮಾತ್ರವೇ ಹೆಚ್ಚಿಸುತ್ತವೆಯೇ ಹೊರತು ಶ್ರವಣ ನಷ್ಟವಾಗಿರುವ ವ್ಯಕ್ತಿಯ ಆವಶ್ಯಕತೆಗೆ ಸ್ಪಂದಿಸುವುದಿಲ್ಲ. ಕಡಿಮೆ ವೆಚ್ಚದಿಂದ ಹಿಡಿದು ದುಬಾರಿ ವೆಚ್ಚದವರೆಗಿನ ಶಿಫಾರಸು ರಹಿತ ಶ್ರವಣ ಸಾಧನಗಳ ಮೇಲೆ ನಡೆಸಿದ ಅನೇಕ ಅಧ್ಯಯನಗಳು ಈ ಅಂಶವನ್ನು ಸಾಬೀತು ಪಡಿಸಿವೆ. ಇಂತಹ ಶ್ರವಣ ಸಾಧನಗಳು ಶ್ರವಣ ನಷ್ಟವಾಗಿರುವ ರೋಗಿಗಳ ಆವಶ್ಯಕತೆಗಳನ್ನು ಪೂರೈಸುವಲ್ಲಿ ಸೋತಿವೆ ಎಂಬುದು ದೃಢ ಪಟ್ಟಿದೆ.
ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲ SOAHS ಸ್ಪೀಚ್‌ ಎಂಡ್‌ ಹಿಯರಿಂಗ್‌ ವಿಭಾಗದಲ್ಲಿ ಶ್ರವಣ ಸಾಮರ್ಥ್ಯ ಪರೀಕ್ಷೆ ಮತ್ತು ಶ್ರವಣ ಸಾಧನ ಟ್ರಯಲ್‌ ಸೇವೆಗಳನ್ನು ನೀಡಲಾಗುತ್ತಿದೆ.
ಶ್ರವಣ ಸಾಧನ ಖರೀದಿಸುವಾಗ ಗಮನಿಸಬೇಕಾದ ಅಂಶಗಳು
ನುರಿತ ಶ್ರವಣ ತಜ್ಞರು (ಆಡಿಯೋಲಜಿಸ್ಟ್‌ ) ನಿಮ್ಮ ಕಿವಿ ಪರೀಕ್ಷೆ ಮಾಡಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳಿ
ಸೌಂಡ್‌ ಟ್ರೀಟೆಡ್‌ ರೂಂ ನಲ್ಲಿ ನಿಮ್ಮ ಕಿವಿಗಳನ್ನು ವಿವರವಾಗಿ ಪರೀಕ್ಷೆ ಮಾಡಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ
ನುರಿತ ಶ್ರವಣ ತಜ್ಞರಿಂದ ನೀವು ಶ್ರವಣ ಸಾಧನವನ್ನು ಖರೀದಿಸಿರುವಿರಿ ಎಂಬುದನ್ನು ಖಚಿತಪಡಿಸಿಕೊಳ್ಳಿ
ನಿಮ್ಮ ಶ್ರವಣ ನಷ್ಟಕ್ಕೆ ಸೂಕ್ತವೆನಿಸುವಂತೆ ನಿಮ್ಮ ಶ್ರವಣ ಸಾಧನದಲ್ಲಿ ಪ್ರೋಗ್ರಾಮಿಂಗ್‌ ಮಾಡುವುದು ನಿಮ್ಮ ಶ್ರವಣ ಸಾಧನ ಸ್ವೀಕೃತ ಎನಿಸಿಕೊಳ್ಳಲು ಇರುವ ಬಹುಮುಖ್ಯ ಅಂಶ.
ನುರಿತ ಶ್ರವಣ ತಜ್ಞರಿಂದ ಸೂಕ್ತ ರೀತಿಯಲ್ಲಿ ಪ್ರೋಗ್ರಾಮಿಂಗ್‌ ಮಾಡಿಲ್ಲದ ಶ್ರವಣ ಸಾಧನವು ತನ್ನ ಉದ್ದೇಶವನ್ನು ಪೂರೈಸುವಲ್ಲಿ ವಿಫ‌ಲವಾಗುತ್ತದೆ.