CLICK HERE ವಿಕಲಚೇತನ App

ಶಾಲಾ ಮಕ್ಕಳಲ್ಲಿ ಶ್ರವಣ ದೋಷ ಪತ್ತೆ ಮಾಡುವ ಅಗತ್ಯವೇ

ಶಾಲಾ ಮಕ್ಕಳಲ್ಲಿ ಶ್ರವಣ ದೋಷ ಅಥವಾ ಕಿವುಡುತನ ಅನ್ನುವುದು ಮಗುವಿನ ಮಾತು ಮತ್ತು ಭಾಷಾ ಕೌಶಲದ ಬೆಳವಣಿಗೆಯಲ್ಲಿ ಬಹಳಷ್ಟು ಹಿನ್ನಡೆಯನ್ನು ಉಂಟುಮಾಡುತ್ತದೆ‌. ಇದರಿಂದ ಮಗುವಿನ ಸಾಮಾಜಿಕ, ಭಾವನಾತ್ಮಕ, ಗ್ರಹಿಕೆಯ ಶಕ್ತಿ, ಶೈಕ್ಷಣಿಕ ಅಭಿವೃದ್ಧಿ, ಉದ್ಯೋಗ ಹಾಗೂ ಆರ್ಥಿಕ ಶಕ್ತಿಯ ಮೇಲೆ ಬಹಳಷ್ಟು ಪರಿಣಾಮವನ್ನು ಕಡಿಮೆ ಮಾಡಬಹುದು.
ಕೆಲವು ಕಿವಿಕೇಳುವ ತೊಂದರೆಗಳು ಹುಟ್ಟಿನಿಂದ ಇರುತ್ತದೆ, ಇನ್ನು ಕೆಲವು ಕಿವಿಕೇಳುವ ತೊಂದರೆಗಳು ಮಕ್ಕಳು ಶಾಲೆಗೆ ಹೋಗುವ ವಯಸ್ಸಿನಲ್ಲಿ ಆರಂಭವಾಗುತ್ತದೆ. ಹುಟ್ಟಿನಿಂದ ಮಗುವಿಗೆ ಕೇಳುವ ತೊಂದರೆ ಇದ್ದರೆ ಮಗುವಿನ ಮಾತು ಕುಂಠಿತಗೊಳ್ಳುತ್ತದೆ. ಮಗುವಿಗೆ ಶಾಲೆಯ ವಯಸ್ಸಿನಲ್ಲಿ ಕಿವಿಯ ದೋಷವಿದ್ದರೆ ಶಾಲೆಯ ಪಾಠವನ್ನು ಗ್ರಹಿಸಲು ಕಷ್ಟವಾಗುತ್ತದೆ. ಆದುದರಿಂದ ಶಾಲೆಗಳಲ್ಲಿ, ವಿದ್ಯಾರ್ಥಿಗಳಿಗೆ ನಿಯಮಿತ ಕಿವಿ ಸ್ಕ್ರೀನಿಂಗ್‌ ಅನ್ನು ಕಡ್ಡಾಯ ಮಾಡದೆ ಹೋದರೆ, ಹೆಚ್ಚು ತೀವ್ರವಾಗಿಲ್ಲದ, ಅಥವಾ ಈಗಷ್ಟೇ ಆರಂಭವಾಗುತ್ತಿರುವ ಅಥವಾ ಒಂದು ಕಿವಿ ಕೇಳಿಸದೆ ಇರುವ ಸಂದರ್ಭಗಳು ಪತ್ತೆ ಆಗದೆಯೇ ಹೋಗುವ ಅಥವಾ ತಪಾಸಣೆ ತಪ್ಪಾಗಿ ಹೋಗುವ ಮತ್ತು ರೋಗ ಪರಿಸ್ಥಿತಿಯ ನಿರ್ವಹಣೆ ಸರಿಯಾಗಿ ಆಗದೆ ಇರುವ ಸಂದರ್ಭ ಬರಬಹುದು.



ಈ ಎಲ್ಲ ಕಾರಣಗಳಿಂದಾಗಿ ಶ್ರವಣ ದೋಷವನ್ನು ಆರಂಭದಲ್ಲಿಯೇ ಗುರುತಿಸುವುದು ಮತ್ತು ಸರಿಯಾದ ಚಿಕಿತ್ಸಾ ಕ್ರಮವನ್ನು ಅನುಸರಿಸುವುದು ಮತ್ತು/ಅಥವಾ ಸರಿಪಡಿಸಿಕೊಳ್ಳುವುದು ಬಹಳ ಆವಶ್ಯಕ. ಮಗುವಿನಲ್ಲಿ ಇರುವಂತಹ ಶ್ರವಣ ದೋಷವನ್ನು ಬಹಳ ಬೇಗನೆ ಗುರುತಿಸದೇ ಇರುವುದು ಅಥವಾ ಅದಕ್ಕೆ ಸರಿಯಾದ ಚಿಕಿತ್ಸೆಯನ್ನು ಕೊಡಿಸದೆ ಇರುವುದರಿಂದ ಆ ಮಗುವಿನ ಶೈಕ್ಷಣಿಕ ಪ್ರಗತಿ, ಗ್ರಹಿಕೆಯ ಸಾಮರ್ಥ್ಯ ಮತ್ತು ಸಾಮಾಜಿಕ ಅಭಿವೃದ್ಧಿಯಲ್ಲಿ ವಿಶೇಷ ಪ್ರಭಾವ ಉಂಟಾಗುತ್ತದೆ. ಮಾತು ಕಲಿಯುವ ಪ್ರಕ್ರಿಯೆಗೆ ಆಧಾರ ನೀಡಬೇಕು ಅನ್ನುವುದು ಕಿವುಡುತನವನ್ನು ಆರಂಭದಲ್ಲೇ ಪತ್ತೆ ಮಾಡಬೇಕು ಎನ್ನುವುದರ ಹಿಂದಿನ ಉದ್ದೇಶ. ಕಿವುಡುತನದ ದುಷ್ಪರಿಣಾಮಗಳನ್ನು ತಗ್ಗಿಸಲು ಇರುವ ಆರಂಭಿಕ ಹಂತಗಳು ಅಂದರೆ ಹೊಸದಾಗಿ ಆರಂಭವಾಗುತ್ತಿರುವ ಶ್ರವಣ ದೋಷವನ್ನು ಮತ್ತು ಒಂದು ಅಥವಾ ಎರಡೂ ಕಿವಿಗಳಲ್ಲಿ ಇರುವ ಶ್ರವಣ ದೋಷವನ್ನು ಪತ್ತೆ ಮಾಡುವುದು, ಸೂಕ್ತ ವೈದ್ಯರಲ್ಲಿ ತಪಾಸಣೆ ಮಾಡಿಸುವುದು ಮತ್ತು ಸರಿಯಾದ ಚಿಕಿತ್ಸೆಯನ್ನು ಪಡೆಯುವುದು.
ಶಾಲಾ ಕೊಠಡಿಯಲ್ಲಿ ಮಗುವು ನಡೆದುಕೊಳ್ಳುವ ರೀತಿಯು ಮಗುವಿಗೆ ಇರಬಹುದಾದ ಕಿವುಡುತನವನ್ನು ಸೂಚಿಸುತ್ತಿರಬಹದು. ಅಂದರೆ ಶಿಕ್ಷಕರು ಹೇಳುವ ವಿಚಾರಕ್ಕೆ ಮಗುವು ಗಮನ ಕೊಡದಿರಬಹುದು, ಕೇಳಿದ್ದನ್ನೇ ಮತ್ತೆ ಮತ್ತೆ ಕೇಳುತ್ತಿರಬಹುದು, ಅಥವಾ ಆತನ/ಆಕೆಯ ಶೈಕ್ಷಣಿಕ ಪ್ರಗತಿಯ ಮಟ್ಟ ಬಹಳ ಕಳಪೆ ಇರಬಹುದು, ಮಾತು ಅಥವಾ ಇನ್ನಿತರ ಶ್ರವಣ ಮಾಹಿತಿಗಳನ್ನು ಅನುಸರಿಸಲು ಮಗುವಿಗೆ ಕಷ್ಟವಾಗುತ್ತಿರಬಹುದು, ಕೇಳುವಿಕೆಯ ಅಥವಾ ಆಲಿಸುವ ಸಂದರ್ಭಗಳಲ್ಲಿ ಮಗುವು ಬಹಳ ಬೇಗನೆ ಆಯಾಸಗೊಳ್ಳಬಹುದು, ಸರಳ ಪ್ರಶ್ನೆಗಳಿಗೂ ಸಹ ಅಸಮರ್ಪಕ ಉತ್ತರಗಳನ್ನು ಕೊಡಬಹುದು, ತನ್ನ ಸಹಪಾಠಿಗಳಿಂದ ದೂರ ಉಳಿಯಬಹುದು, ಮಗುವು ಓದುವ ಕೌಶಲದಲ್ಲಿ ಹಿಂದುಳಿಯಬಹುದು, ಮಾತನಾಡಲು ಮತ್ತು/ಅಥವಾ ಬರೆಯಲು ಕಷ್ಟವಾಗುತ್ತಿರಬಹುದು, ಬಹಳ ಬೇಗನೆ ಕಿರಿಕಿರಿಗೊಳ್ಳಬಹುದು. ಶಾಲಾ ಮಕ್ಕಳಲ್ಲಿ ಈ ಮೇಲೆ ಹೇಳಿದ ಯಾವುದೇ ನಡವಳಿಕೆಯನ್ನು ಗುರುತಿಸುವುದರಿಂದ, ಮಗುವಿನ ಶ್ರವಣ ವಿಶ್ಲೇಷಣೆಯ ಮೂಲಕ ಶ್ರವಣ ದೋಷವು ಯಾವ ಮಟ್ಟದಲ್ಲಿದೆ ಎಂಬುದನ್ನು ಗುರುತಿಸಲು ಸಹಾಯವಾಗುತ್ತದೆ.
ಸ್ಕ್ರೀನಿಂಗ್‌ ಅಥವಾ ರೋಗಪತ್ತೆ ಮಾಡುವ ಕಾರ್ಯದ ಬಹುಮುಖ್ಯ ಉದ್ದೇಶ ಅಂದರೆ ಕಿವುಡುತನ ಇರಬಹುದು ಎಂಬ ಸಂದೇಹ ಇದ್ದಾಗ ಕಿವುಡುತನದ ಮಟ್ಟವನ್ನು ಗುರುತಿಸುವುದು ಮತ್ತು ಆದಷ್ಟು ಬೇಗನೆ ಮಾಡಬೇಕಾಗಿರುವ ಇನ್ನಷ್ಟು ಪರೀಕ್ಷೆಗಳು ಮತ್ತು ತಪಾಸಣೆಗಳ ಆವಶ್ಯಕತೆ ಇದೆಯೇ ಎಂಬುದನ್ನು ಗುರುತಿಸುವುದಾಗಿರುತ್ತದೆ. ಶಾಲಾ ವಯಸ್ಸಿನ ಮಕ್ಕಳ ಶ್ರವಣ ದೋಷ ಸ್ಕ್ರೀನಿಂಗ್‌ ಅಂದರೆ ಜನ್ಮಜಾತವಾಗಿ ಕಿವುಡುತನ ಇದ್ದು ಅದು ಪತ್ತೆಯಾಗದಿರುವ, ಅನುಸರಣೆ ಸಾಧ್ಯ ಆಗದಿರುವ ಅಥವಾ ಅನಂತರ ಶ್ರವಣ ನಷ್ಟ ಕಾಣಿಸಿಕೊಂಡಿರುವ ಮಕ್ಕಳಲ್ಲಿ ಶ್ರವಣ ದೋಷವನ್ನು ಗುರುತಿಸುವಲ್ಲಿ ವಿಶೇಷ ಪಾತ್ರವನ್ನು ವಹಿಸುವ ತಪಾಸಣಾ ಕ್ರಮ (ಸ್ಕ್ರೀನಿಂಗ್‌) ಆಗಿರುತ್ತದೆ.
ಶಾಲಾ ವಯಸ್ಸಿನ ಮಕ್ಕಳಲ್ಲಿ ಕಂಡುಬರುವ ಮೂರು ಬಹುಮುಖ್ಯ ಮತ್ತು ಸಾಮಾನ್ಯ ವಿಧದ ಶ್ರವಣ ದೋಷಗಳು ಯಾವುವು:-
ಕಂಡಕ್ಟಿವ್‌ ಶ್ರವಣ ದೋಷ ಇದು ಶಾಶ್ವತ ಅಲ್ಲದ ಅಥವಾ ಅಲ್ಪಕಾಲಿಕ ವಿಧದ ಶ್ರವಣ ದೋಷ. ಹೊರ ಮತ್ತು/ಅಥವಾ ಮಧ್ಯ ಕಿವಿಯ ಅಸಹಜತೆಗಳಿಂದಾಗಿ (ಕಿವಿಯ ಸೋಂಕು ಅಥವಾ ಕಿವಿಯ ಅಸಹಜ ಸಂರಚನೆ ಇತ್ಯಾದಿ ಕಾರಣಗಳಿಂದ ಉಂಟಾಗುತ್ತದೆ), ಕಂಡಕ್ಟಿವ್‌ ಶ್ರವಣ ದೋಷ ಕಾಣಿಸಿಕೊಳ್ಳಬಹುದು. ಈ ವಿಧದ ಕಿವುಡುತನ ಇರುವ ಬಹಳಷ್ಟು ಪ್ರಕರಣಗಳಿಗೆ ಔಷಧಿ ಅಥವಾ ಶಸ್ತ್ರಚಿಕಿತ್ಸೆಯಿಂದ ಪರಿಹಾರ ಸಿಕ್ಕಿರುತ್ತದೆ.
ಸೆನ್ಸರಿನ್ಯೂರಲ್‌ ಶ್ರವಣ ದೋಷ ಇದು ಎರಡನೆಯ ವಿಧದ ಮತ್ತು ಶಾಶ್ವತ ರೀತಿಯ ಶ್ರವಣ ದೋಷ ಆಗಿದ್ದು ಒಳಕಿವಿಯ ಅಸ್ವಸ್ಥತೆಯ (ಅಂದರೆ ಮೆದುಳು ಜ್ವರ, ಶಬ್ದಗಳಿಗೆ ಒಡ್ಡಿಕೊಳ್ಳುವುದು ಅಥವಾ ಜನ್ಮಜಾತ ತೊಂದರೆಗಳು ಇತ್ಯಾದಿ) ಕಾರಣದಿಂದಾಗಿ ಇದು ಕಾಣಿಸಿಕೊಳ್ಳುತ್ತದೆ. ಈ ವಿಧದ ಶ್ರವಣ ದೋಷಕ್ಕೆ ಅನುಸರಿಸಬಹುದಾದ ಚಿಕಿತ್ಸಾ ಕ್ರಮ ಅಂದರೆ ಶಸ್ತ್ರಚಿಕಿತ್ಸೆ ಅಥವಾ ಶ್ರವಣ ಸಾಧನಗಳ ಬಳಕೆ.
ಮಿಶ್ರ ಶ್ರವಣ ದೋಷ ಅಂದರೆ ಕಂಡಕ್ಟಿವ್‌ ಮತ್ತು ಸೆನ್ಸೋನ್ಯೂರಲ್‌ ಶ್ರವಣ ದೋಷಗಳು ಜತೆಯಾಗಿ ಬರುವ ಒಂದು ಶ್ರವಣ ದೋಷ. ಈ ವರ್ಗದ ಶ್ರವಣ ದೋಷದಲ್ಲಿ ಹೊರ ಅಥವಾ ಮಧ್ಯ ಕಿವಿಯಲ್ಲಿ ಮತ್ತು ಒಳಕಿವಿಯಲ್ಲಿ ಅಸ್ವಸ್ಥತೆ ಇರಬಹುದು ಅಥವಾ ಹಾನಿ ಆಗಿರಬಹುದು.
ಶ್ರವಣ ದೋಷವನ್ನು ಪತ್ತೆ ಮಾಡುವುದು (ಸ್ಕ್ರೀನಿಂಗ್‌) ಅಂದರೆ, ಕಿವುಡುತನ ಇಲ್ಲವೋ ಇದೆಯೋ ಅನ್ನುವುದನ್ನು ಪತ್ತೆ ಮಾಡುವುದು ಅಷ್ಟೆ; ಅದು ಶ್ರವಣ ಸಂವೇದನಾಶೀಲತೆಯ (ಕೇಳುವಿಕೆಯ) ಸಂಪೂರ್ಣ ವಿಶ್ಲೇಷಣೆ ಅಲ್ಲ ಎಂಬುದು ನೆನಪಿಡಬೇಕಾದ ಬಹುಮುಖ್ಯ ವಿಷಯ. ಸ್ಕ್ರೀನಿಂಗ್‌ನಲ್ಲಿ ಪಾಸ್‌ ಆಗಲಿಲ್ಲ ಅಂದ ಮಾತ್ರಕ್ಕೆ ಅವರಿಗೆ ಕಿವಿಯೇ ಕೇಳಿಸುವುದಿಲ್ಲ ಎಂದು ಅರ್ಥ ಅಲ್ಲ, ಅದಕ್ಕೆ ಬದಲಾಗಿ ಆದಷ್ಟು ಬೇಗನೆ ಇನ್ನಷ್ಟು ಆಳವಾದ ವಿಶ್ಲೇಷಣೆಯ ಅಗತ್ಯ ಇದೆ ಎಂಬುದನ್ನು ಇದು ಸೂಚಿಸುತ್ತಿರಬಹುದು.
ಈ ಎಲ್ಲ ಕಾರಣಗಳಿಂದಾಗಿ ಶಾಲೆಗಳಲ್ಲಿ ಪಠ್ಯ ಕ್ರಮಕ್ಕೆ ಅನುಸಾರವಾಗಿ, ವಾರ್ಷಿಕ ಶ್ರವಣ ಸ್ಕ್ರೀನಿಂಗ್‌ ಅನ್ನು ಕಡ್ಡಾಯಗೊಳಿಸು ವುದು ಆವಶ್ಯಕ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎನ್ನುವ ಉದ್ದೇಶದಿಂದ, ಶಾಲಾ ಆಡಳಿತ ಮತ್ತು ಹೆತ್ತವರಿಗೆ ಮಾಹಿತಿ ನೀಡುವುದಕ್ಕಾಗಿ ಈ ಲೇಖನವನ್ನು ಪ್ರಕಟಿಸುತ್ತಿದ್ದೇವೆ. ಹೆಚ್ಚಿನ ಮಾಹಿತಿಗಾಗಿ ಉಡುಪಿಯ ಡಾ| ಟಿಎಂಎ ಪೈ ಆಸ್ಪತ್ರೆ ಅಥವಾ ಮಣಿಪಾಲದ ಕೆ ಎಂ ಸಿ ಆಸ್ಪತ್ರೆಯ ಆಡಿಯೋಲಜಿ ವಿಭಾಗವನ್ನು ಸಂಪರ್ಕಿಸಬಹುದು.
- ಡಾ| ಅರ್ಚನಾ ಜಿ.,
ಶ್ರವಣ ತಜ್ಞರು,
ಸ್ಪೀಚ್‌ ಎಂಡ್‌ ಹಿಯರಿಂಗ್‌ ವಿಭಾಗ,
ಡಾ| ಟಿ ಎಂ ಎ ಪೈ ಆಸ್ಪತ್ರೆ ಉಡುಪಿ ಮತ್ತು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ.